ಪಂಚ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲಾ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವ ತಮ್ಮ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದನ್ನು ಕಾರ್ಡ್ ರೂಪದಲ್ಲಿ ಪ್ರತಿ ಮನೆ ಮನೆಗೆ ತಲುಪಿಸಿದಾಗ ಗ್ಯಾರಂಟಿಗೆ ವಾರಂಟಿ ಇಲ್ಲಾ, ಅದು ಪುಸ್ತಕದೊಳಗಿನ ನವಿಲು ಗರಿ ಎಂದು ಟೀಕೆ ಹಾಗೂ ಲೇವಡಿ ಮಾಡಿದ ಉಡುಪಿ ಜಿಲ್ಲಾ ಬಿಜೆಪಿ ಶಾಸಕರುಗಳಿಗೆ ಪಂಚ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲಾ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ನಡೆಯುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಗ್ರಾಮ ಪಂಚಾಯತುಗಳಿಂದ ಹಣ ಪಡೆದರೆ ತಪ್ಪೇನು, ಗ್ರಾಮ ಪಂಚಾಯತುಗಳು ಕೂಡ ಸರ್ಕಾರದ ಒಂದು ಭಾಗ. ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಮಾಡುವ ಅವಕಾಶ ಗ್ರಾಮ ಪಂಚಾಯತುಗಳಿಗೆ ಇದೆ. ಇವತ್ತು ಗ್ಯಾರಂಟಿ ಎನ್ನುವುದು ಬಿಜೆಪಿಯವರಿಗೆ ಒಂದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪಂಚ ಗ್ಯಾರಂಟಿಯಿಂದ ರಾಜ್ಯದ ಜನತೆ ಆರ್ಥಿಕ ಸದೃಢತೆ ಕಾಣುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಸಿದ್ಧಾಂತವೇ ಆಗರ್ಭ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿಸುವುದು ಮತ್ತು ಮಧ್ಯಮ ವರ್ಗದವರು ಮತ್ತು ಬಡವರು ಮತ್ತಷ್ಟು ಸಮಸ್ಯೆಗೆ ಒಳಗಾಗುವಂತೆ ಮಾಡುವುದು. ಇವತ್ತು ಮೂರು ಅವಧಿಯಿಂದ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ನೇತ್ರತ್ವದ ಸರ್ಕಾರದ ನಡೆ ನೋಡಿದರೆ ತಿಳಿಯುತ್ತದೆ. ಕೇವಲ ಅದಾನಿ, ಅಂಬಾನಿ ಅಂತಹ ಶ್ರೀಮಂತರಿಗೆ ಈ ಸರ್ಕಾರ ಮಂಡಿಯೂರಿದೆ ಬಿಟ್ಟರೆ ಮಧ್ಯಮ ವರ್ಗ ಹಾಗೂ ಬಡವರಿಗೆ ಈ ಸರ್ಕಾರ ಶಾಪವಾಗಿ ಪರಿಣಮಿಸಿದೆ.

ಗ್ಯಾರಂಟಿ ಸಮಾವೇಶ ಟೀಕಿಸುವ ಜಿಲ್ಲೆಯ ಶಾಸಕರುಗಳು ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿ ಎಸ್ ಟಿ ಹಣದ ಪಾಲನ್ನು ಆದಷ್ಟು ಬೇಗ ನೀಡುವಂತೆ ಆಗ್ರಹ ಮಾಡಲಿ. ಸರ್ಕಾರಿ ಕಾರ್ಯಕ್ರಮ ಸರ್ಕಾರದ ಅನುದಾನದಲ್ಲೇ ನಡೆಯುವುದು ಎನ್ನುವ ಕನಿಷ್ಠ ಜ್ಞಾನವನ್ನು ಬಿಜೆಪಿ ಶಾಸಕರುಗಳು ಇನ್ನಾದರೂ ಬೆಳೆಸಿಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.