ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಂ||
ಕೈ ತುದಿಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ.ಕೈಯ ನಡುವಿನಲ್ಲಿ ಸರಸ್ವತೀ ಇದ್ದಾಳೆ. ಕೈಯ ಬುಡದಲ್ಲಿ ಗೌರಿ ನಿಂತಿದ್ದಾಳೆ. ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ನಾವು ನಮ್ಮ ಕೈಯ ದರ್ಶನ ಮಾಡಿ ನಮಸ್ಕರಿಸಬೇಕು.
ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ|
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ||
ಭೂದೇವಿಯೇ ,ಕಡಲ ಬಟ್ಟೆಯನ್ನು ಉಟ್ಟವಳೇ ಬೆಟ್ಟಗಳೆಂಬ ಸ್ತನ ಮಂಡಲವನ್ನು ಹೊತ್ತಲ್ಲೇ,ವಿಷ್ಣುಪತ್ನಿಯೇ ನಿನಗೆ ನಮಸ್ಕಾರ. ನನ್ನ ಪಾದ ಸ್ಪರ್ಶವನ್ನು ಕ್ಷಮಿಸು.ಎಂದು ಹಾಸಿಗೆಯಿಂದ ಏಳುವಾಗ ಭೂಮಿ ತಾಯಿಗೆ ನಮಸ್ಕರಿಸಿ ನಮ್ಮ ಪಾದ ಭೂಮಿಯ ಮೇಲೆ ಇಡುವುದಾಗಿದೆ. ಹೊಸ್ತಿಲಿಗೆ ರಂಗೋಲಿ ಹಾಕಿ ಹೂವು ಇಟ್ಟು ನಮಸ್ಕರಿಸಬೇಕು.ಮನೆಯಂಗಳದಲ್ಲಿ ರಂಗೋಲಿ ಹಾಕಿ ರಂಗೋಲಿಯಲ್ಲಿ ದೇವರನ್ನು ಕಂಡು ನಮಸ್ಕರಿಸಬೇಕು.
ಗೋಮಾತೆ ಗೆ ಬೆಳಿಗ್ಗೆ ಎದ್ದೊಡನೆ ನಮಸ್ಕಾರ ಮಾಡುವುದು. ಸ್ನಾನ ಮಾಡುವಾಗ ನೀರನ್ನು ಗಂಗಾದೇವಿ ನಾಮ ಸ್ಮರಿಸಿ ನಮಸ್ಕರಿಸಿ ಸ್ನಾನ ಮಾಡಬೇಕು. ತುಲಸೀ ಕಟ್ಟೆಯಲ್ಲಿ ತುಲಸೀ ಗೆ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು. ಮನೆಯಂಗಳದಿಂದಲೇ ಭಗವಾನ್ ಶ್ರೀ ಸೂರ್ಯ ದೇವರಿಗೆ ನಮಸ್ಕಾರ ಮಾಡುವುದು. ನಂತರ ದೇವರಿಗೆ ನಮಸ್ಕಾರ,ಗುರು ಹಿರಿಯರಿಗೆ,ತಂದೆ ತಾಯಿಯವರಿಗೆ ನಮಸ್ಕಾರ ಮಾಡಿ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸಬೇಕು.
ನಮಸ್ಕಾರದ ಹಿಂದಿರುವ ವಿಜ್ಞಾನ, ಸಂಸ್ಕಾರ ಅದರ ಮಹತ್ವ ಎಲ್ಲರೂ ಅರಿಯಬೇಕು. ನಮಸ್ಕಾರ ಎಂದರೆ ಕೃತಜ್ಞತೆ ಸೂಚಿಸುವ ಗೌರವ ಅರ್ಪಿಸುವ ಒಂದು ವಿಶಿಷ್ಟ ಸಾಂಪ್ರದಾಯಿಕ ಕ್ರಮ.
"ನಮಸ್ಕಾರಗಳ ವೈವಿಧ್ಯತೆಗಳು" ಎರಡೂ ಕೈ ಜೋಡಿಸಿ ಮಾಡುವ ನಮಸ್ಕಾರ.ದೀರ್ಘವಾಗಿ ಮಲಗಿ ಎರಡೂ ಕೈಗಳನ್ನು ಉದ್ದಕ್ಕೆ ನೀಡಿ ನಮಸ್ಕಾರ ಮಾಡುವುದಕ್ಕೆ ಉದ್ದಂಡ ನಮಸ್ಕಾರ ಎನ್ನುತ್ತಾರೆ.
ಎದೆಯ ಸಮಾನವಾಗಿ ಕೈ ಮೇಲೆತ್ತಿ ಎದೆ ಗೆ ತಾಗುವಂತೆ ಜೋಡಿಸಿ ಮಾಡುವ ನಮಸ್ಕಾರಕ್ಕೆ ಹನುಮ ನಮಸ್ಕಾರ ಎನ್ನುತ್ತಾರೆ. ನಮ್ಮ ದೇಹದ ಎಂಟೂ ಅಂಗಾಂಗಳನ್ನು ನೆಲಕ್ಕೆ ತಾಗಿಸಿ ಮಾಡುವ ನಮಸ್ಕಾರ ಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುವುದಾಗಿದೆ. ನಮ್ಮ ಹೆತ್ತವರಾದ ತಂದೆ ತಾಯಿಯವರಿಗೆ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವುದು ಪದ್ದತಿ. ಗುರುಗಳಿಗೆ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುತ್ತೇವೆ. ಆಗ ಗುರುಗಳು ತಲೆ ಮುಟ್ಟಿ ಆಶೀರ್ವಾದ ಮಾಡುತ್ತಾರೆ ಇದರಿಂದ ಶರೀರದಲ್ಲಿ ಶಕ್ತಿ ಸಂಚಯವಾಗಲಿದೆ.
ಇನ್ನೂ ದೇವರಿಗೆ ಪ್ರದಕ್ಷಿಣೆ ಮಾಡಿ ಮಾಡುವ ನಮಸ್ಕಾರ. ಹೀಗೆ ಹಲವು ಹತ್ತು ವಿಧಾನಗಳು ನಮಸ್ಕಾರಗಳಲ್ಲಿದೆ.
"ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ" ಎಂದು ಸಮರ್ಪಣಾ ಭಾವದಿಂದ ಭಗವಂತನಿಗೆ ನಮಸ್ಕಾರದಲ್ಲಿ ಎಂತಹ ಅದ್ಭುತ ಕೃತಜ್ಞತಾ ಭಾವ ಇದೆ.
ಇನ್ನೂ ಯಕ್ಷಗಾನದ ನಮಸ್ಕಾರ. ಭರತನಾಟ್ಯ ನಮಸ್ಕಾರ. ಸೇನಾ ನಮಸ್ಕಾರ .ಪೋಲೀಸ್ ನಮಸ್ಕಾರ.ಕರಾಟೆಯ ನಮಸ್ಕಾರ.
ವಿವಿಧ ಆಟಗಳನ್ನು ಆಡುವ ಮುನ್ನ ಕೈ ಕುಲುಕಿ ಕುಲುಕಿ ಕುಲುಕಿ ಮಾಡುವ ನಮಸ್ಕಾರ.
"ನಮಸ್ಕಾರದ ವೈಜ್ಞಾನಿಕ ಹಿನ್ನೆಲೆ"
ದೇಹದ ಎಲ್ಲಾ ನರನಾಡಿಗಳು ಕೈಯ ಹಸ್ತ ಹಾಗೂ ಪಾದದ ತುದಿಯಲ್ಲಿ ಸಂಪರ್ಕ ಇದೆ ಎನ್ನುತ್ತಾರೆ ಮನೋವೈದ್ಯರು. ಎರಡೂ ಹಸ್ತಗಳಿಂದ ಕೈ ಉಜ್ಜಿಕೊಂಡು ಬೆಳಿಗ್ಗೆ ಏಳುತ್ತೇವೆ ಇದರಿಂದ ರಾತ್ರಿ ಇಡೀ ಜಡವಾಗಿದ್ದ ನಮ್ಮ ಶರೀರ ಮುಂದಿನ ಚಟುವಟಿಕೆ ಗೆ ಅನುವು ಮಾಡಿಕೊಡುತ್ತದೆ. ಯಾವುದೇ ವ್ಯಕ್ತಿ ನಮ್ಮ ಎದುರು ಬಂದಾಗ ಮೊದಲು ನಮಸ್ಕಾರ ಮಾಡಿ ಪರಿಚಯ ಮಾಡಿಕೊಳ್ಳುವುದು.ಹೀಗೆ ನಮಸ್ಕಾರ ಎನ್ನುವುದು ಮನುಷ್ಯನ ಸಾಮಾಜಿಕ ಜೀವನದಲ್ಲಿ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಇನ್ನೂ ನಮಸ್ಕಾರದ ಬಗ್ಗೆ ತಿಳಿದಷ್ಟು ಇದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ಬಿಂಬಿಸುವ ನಮಸ್ಕಾರದ ಬಗ್ಗೆ ಎಳೆವೆಯಿಂದಲೇ ಹೇಳಿಕೊಡುವ ಕೆಲಸ ನಮ್ಮ ಹಿರಿಯರಿಂದ ಆಗಬೇಕು..ನಮ್ಮ ಒಂದೊಂದು ನಮಸ್ಕಾರ ಸಾವಿರ ಸಾವಿರ ಸ್ನೇಹಿತರನ್ನು ಗಳಿಸಿಕೊಡಲಿದೆ. ನಮಸ್ಕಾರ ಪರಸ್ಪರ ಗೌರವ ಹೆಚ್ಚಿಸುತ್ತದೆ. ನಾವು ನಮ್ಮ ಹಿರಿಯರನ್ನು ಗೌರವಿಸುವುದನ್ನು ನಮಸ್ಕರಿಸುವ ಸಂಪ್ರದಾಯ ಪದ್ಧತಿಗಳನ್ನು ರೂಢಿಸಿಕೊಳ್ಳೋಣ. ನಮ್ಮ ಸನಾತನ ಧರ್ಮದ ಪ್ರತೀಕವಾದ ನಮಸ್ಕಾರ ಎಂಬ ಸಂಸ್ಕ್ರತಿ ಸಂಸ್ಕಾರ ಉಳಿಸಿ ಬೆಳೆಸೋಣ.
"ಸರ್ವೇ ಜನಾಃ ಸುಖಿನೋ ಭವಂತು"





