ಪ್ರಕೃತಿದತ್ತ ಮರಳಿಗೂ ಕೃತಕ ಬೆಲೆ ಏರಿಕೆ: ಬಡವರ ಮನೆ ಕನಸಿಗೆ ಕೊಡಲಿ ಪೆಟ್ಟು!

ಕುಂದಾಪುರ: ಪ್ರಕೃತಿದತ್ತವಾಗಿ ಲಭ್ಯವಾಗುವ ಮರಳಿಗೆ ಅನಗತ್ಯವಾಗಿ ಬೆಲೆ ಏರಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಮರಳುಗಾರಿಕೆ ನಡೆಸುವ ಕೆಲವರ ಲಾಭದ ಉದ್ದೇಶಕ್ಕೆ ಬಡ ಮತ್ತು ಮಧ್ಯಮ ವರ್ಗದ ಜನರು ಬಲಿಯಾಗುವಂತಾಗಬಾರದು. ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಸಾಮಾನ್ಯ ಜನರ ಕನಸಿಗೆ ಮರಳಿನ ಬೆಲೆ ಏರಿಕೆ ದೊಡ್ಡ ಅಡ್ಡಿಯಾಗಬಾರದು ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಆಗ್ರಹಿಸಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಮರಳುಗಾರಿಕೆ ಆರಂಭವಾಗಲಿದ್ದು, ಉಡುಪಿ ಜಿಲ್ಲೆಯಲ್ಲಿ ಹೇರಳವಾಗಿ ಮರಳು ಲಭ್ಯವಿದ್ದರೂ, ಜಿಲ್ಲೆಯ ಜನರಿಗೇ ಕೈಗೆಟಕುವ ದರದಲ್ಲಿ ಮರಳು ದೊರೆಯದಿರುವುದು ವಿಪರ್ಯಾಸ. ಪ್ರಕೃತಿಯ ಸಂಪನ್ಮೂಲವಾಗಿರುವ ಮರಳನ್ನು ಜನರ ಅಗತ್ಯಕ್ಕೆ ಪೂರಕವಾಗಿ ಬಳಸಬೇಕೇ ಹೊರತು, ಕೆಲವರ ಲಾಭದ ದಂಧೆಗೆ ಅವಕಾಶ ಮಾಡಿಕೊಡುವ ಸಾಧನವಾಗಬಾರದು.

ಈಗಾಗಲೇ ಸಿಮೆಂಟ್, ಕಬ್ಬಿಣ, ಕಟ್ಟಡ ಸಾಮಗ್ರಿಗಳು ಹಾಗೂ ಕೂಲಿ ಕಾರ್ಮಿಕರ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರಳಿನ ಬೆಲೆಯನ್ನೂ ಹೆಚ್ಚಿಸಿದರೆ ಬಡವರು ಮತ್ತು ಮಧ್ಯಮ ವರ್ಗದವರು ಮನೆ ನಿರ್ಮಾಣದ ಕನಸನ್ನೇ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಾಲ ಮಾಡಿ ಮನೆ ಕಟ್ಟುವವರ ಪಾಲಿಗೆ ಮರಳಿನ ಬೆಲೆ ಏರಿಕೆ ಮತ್ತೊಂದು ಆರ್ಥಿಕ ಹೊರೆಯಾಗಲಿದೆ.

ಮರಳುಗಾರಿಕೆ ನಡೆಸುವವರು ಹಣ ಮಾಡುವ ಉದ್ದೇಶದಿಂದ ಸಾಮಾನ್ಯ ಜನರ ಬದುಕಿನೊಂದಿಗೆ ಆಟವಾಡಬಾರದು. ಜಿಲ್ಲೆಯಲ್ಲಿ ದೊರೆಯುವ ಮರಳಿಗೆ ಜಿಲ್ಲೆಯ ಜನರಿಗೆ ಮೊದಲ ಆದ್ಯತೆ ನೀಡಬೇಕು. ಹೊರಗಿನ ಮಾರುಕಟ್ಟೆಯ ಲಾಭದ ಲೆಕ್ಕಾಚಾರಕ್ಕಿಂತ ಸ್ಥಳೀಯ ಜನರ ಬದುಕು ಮತ್ತು ಅಗತ್ಯಗಳಿಗೆ ಆದ್ಯತೆ ನೀಡುವುದು ಆಡಳಿತದ ಜವಾಬ್ದಾರಿಯಾಗಿದೆ.

ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಮರಳಿನ ದರವನ್ನು ನಿಯಂತ್ರಿಸಬೇಕು. ಜಿಲ್ಲೆಯ ಜನರಿಗೆ ಅತ್ಯಂತ ಕಡಿಮೆ ಹಾಗೂ ನ್ಯಾಯಯುತ ದರದಲ್ಲಿ ಮರಳು ದೊರೆಯುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮರಳುಗಾರಿಕೆ ಕೆಲವರ ಆರ್ಥಿಕ ಲಾಭಕ್ಕೆ ಸೀಮಿತವಾಗದೆ, ಜನಸಾಮಾನ್ಯರ ಮನೆ ನಿರ್ಮಾಣದ ಕನಸಿಗೆ ನೆರವಾಗುವಂತಿರಬೇಕು ಎಂದು ಅಶೋಕ್ ಪೂಜಾರಿ ಬೀಜಾಡಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.