ಕುಂದಾಪುರ: ಮಳೆಗಾಲ ಮುಗಿದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಸಿಹಿ ನೀರು ಮರಳುಗಾರಿಕೆ ಪ್ರಾರಂಭವಾಗದ ಕಾರಣ ಉಡುಪಿ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಮರಳು ಪೂರೈಕೆ ಇಲ್ಲದೆ ಅತೀವ ತೊಂದರೆಯಾಗುತ್ತಿದ್ದು ಆದಷ್ಟು ಬೇಗ ಸಿಹಿ ನೀರು ಮರಳುಗಾರಿಕೆ ಪ್ರಾರಂಭ ಮಾಡಬೇಕೆಂದು ಕುಂದಾಪುರ ತಾಲ್ಲೂಕು ರೈತ ಸಂಫದ ಅಧ್ಯಕ್ಷರಾದ ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅಧಿಕೃತ ಮರಳುಗಾರಿಕೆಗೆ ಅವಕಾಶ ಪಡೆದವರ ಮೂಲಕ ಆದಷ್ಟು ಬೇಗ ಮರಳು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಿ ಸಮರ್ಪಕ ಮರಳು ಪೂರೈಕೆ ಇಲ್ಲದ ಕಾರಣ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಅತೀವ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಬೇರೆ, ಬೇರೆ ನೀತಿ, ಕಾನೂನುಗಳನ್ನು ಮುಂದಿಟ್ಟು ಮರಳುಗಾರಿಕೆಗೆ ಅನಗತ್ಯ ವಿಳಂಬ ಮಾಡದೆ ಕಾನೂನು ಪ್ರಕಾರ ಮರಳುಗಾರಿಕೆಗೆ ಅವಕಾಶ ಪಡೆದ ಪರವಾನಗೆದಾರರಿಗೆ ಆದಷ್ಟು ಬೇಗ ಮರಳು ಪೂರೈಕೆ ಮಾಡಲು ಅನುಮತಿ ನೀಡಬೇಕು. ಹಾಗೂ ಜಿಲ್ಲೆಯ ಸಂಸದರು ಹಾಗೂ ಶಾಸಕರು ಮರಳು ಪೂರೈಕೆ ವಿಳಂಬದಿಂದ ಆಗುತ್ತಿರುವ ತೊಂದರೆಯನ್ನು ಪರಿಹಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.





