ಕುಂಭಾಸಿ: ಹೂವಿನ ಕೋಲು ಕಲಾ ಪ್ರಕಾರವು ಗತಕಾಲದಿಂದಲೂ ಪ್ರಸಿದ್ಧಿ ಹೊಂದಿದ ಕಲೆ. ಇಂತಹ ಕಲೆಯು ಅಳಿದೇ ಹೋಯಿತು ಎನ್ನುವ ಕಾಲಘಟ್ಟದಲ್ಲಿ ಯಶಸ್ವಿ ಕಲಾವೃಂದ ಕೊಮೆಯ ತಂಡ ಮತ್ತೆ ಆಯ್ದ ಮನೆಗಳಿಗೆ ಮಕ್ಕಳ ಕಲಾ ತಂಡವನ್ನು ಕೊಂಡೊಯ್ದು ಹೂವಿನಕೋಲು ನಡೆಸಿಕೊಡುವ ಅಸಾಧ್ಯ ಕೆಲಸಕ್ಕಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಕಲಾ ಪ್ರೇಮಿಗಳು ಸಂತಸ ಪಡಬೇಕಾದ ವಿಷಯ. ಇಂತಹ ಕಲಾ ಪ್ರಕಾರವನ್ನು ಪ್ರಸ್ತುತ ಕಾಲಘಟ್ಟದಲ್ಲಿ 11 ದಿನಗಳ ಕಾಲ ಗಣ್ಯರ ಮನೆಗಳಿಗೆ ತೆರಳಿ ಪುನರುಜ್ಜೀವನಗೊಳಿಸಿಕೊಂಡು ನಡೆಸುತ್ತಿರುವ ಸಂಸ್ಥೆಯನ್ನು ಶ್ಲಾಘಿಸಲೇಬೇಕು ಎಂದು ಆನೆಗುಡ್ಡೆ ದೇಗುಲದ ಹಿರಿಯ ಸಿಬ್ಬಂದಿ ರಾಜಾರಾಮ ಉಪಾಧ್ಯಾಯ ಹೇಳಿದರು.

ತೆಕ್ಕಟ್ಟೆಯ ಕೊಮೆ ಯಶಸ್ವಿ ಕಲಾವೃಂದದ ನೇತೃತ್ವದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಜರುಗಿದ ಹೂವಿನಕೋಲು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಗಣಪತಿ ಹೆಗಡೆ ಯಲ್ಲಾಪುರ, ವೆಂಕಟೇಶ ವೈದ್ಯ, ಸುಧಾಕರ ಆಚಾರ್ಯ, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.
ಬಳಿಕ ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಉಳ್ತೂರು ಭಾಗದ ಕೆಲವು ಗಣ್ಯರ ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನಡೆಯಿತು.





