ಕೊರವಡಿ ರೋಟರಿ ಸಮುದಾಯ ದಳದ ಕನ್ನಡ ರಾಜ್ಯೋತ್ಸವದಲ್ಲಿ ಉದಯ್ ಕುಮಾರ್ ಶೆಟ್ಟಿ
ತೆಕ್ಕಟ್ಟೆ: 1973ರ ನ. 1ರಂದು ಅನೇಕ ಕನ್ನಡ ಪರ ಹೋರಾಟಗಾರರ ಹೋರಾಟದ ಫಲವಾಗಿ ಕರ್ನಾಟಕ ಎಂಬ ಹೆಸರಿನಿಂದ ಈ ನಮ್ಮ ರಾಜ್ಯ ಉದಯವಾಯಿತು. ಕರ್ನಾಟಕ ರಾಜ್ಯ ನಮ್ಮ ಧೀಮಂತ ರಾಜ್ಯ. ಈ ನೆಲದ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳೆಲ್ಲವೂ ಸೇರಿಕೊಂಡು ನಮ್ಮ ಕನ್ನಡ ಭಾಷೆ ಶ್ರೀಮಂತವಾಗಿ ಬೆಳೆದು ನಿಂತಿದೆ. ಕನ್ನಡ ಭಾಷೆಯ ಬಗ್ಗೆ ಯಾವುದೇ ಕೀಳರಿಮೆ ಬೇಡ. ಭಾಷೆಯ ಬಗ್ಗೆ ಪ್ರೀತಿ, ವ್ಯಾಮೋಹ ಬೇಕು. ಇಂದು ಪ್ರತಿಷ್ಠೆಯ ಕಾರಣದಿಂದ ನಮ್ಮ ಮಾತೃಭಾಷೆಯನ್ನು ಮರೆಯುತ್ತಿದ್ದೇವೆ. ಈ ಪುಣ್ಯದ ನೆಲದ ಉಳಿವಿಗಾಗಿ ಸತತ 36 ವರ್ಷಗಳಿಂದ ಕೊರವಡಿ ರೋಟರಿ ಸಮುದಾಯ ದಳದ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಸಮಾಜ ಸೇವೆಯ ಕೊಡುಗೆ ಅಪಾರವಾದದ್ದು ಎಂದು ಕನ್ನಡ ಉಪನ್ಯಾಸಕ ಉದಯ್ ಕುಮಾರ್ ಶೆಟ್ಟಿ ಕಾಳಾವರ ಹೇಳಿದರು.

ಕೊರವಡಿ ರೋಟರಿ ಸಮುದಾಯ ದಳದ ವತಿಯಿಂದ ಕೊರವಡಿ ಶ್ರೀನಿಧಿ ಕಾಂಪ್ಲೆಕ್ಸ್ನ ರೋಟರಿ ಸಮುದಾಯ ದಳದ ಸಭಾಭವನದಲ್ಲಿ ಜರುಗಿದ 71ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೊರವಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ರಾಮಚಂದ್ರ ಉಪಾಧ್ಯ, ರೋಟರಿ ಸಮುದಾಯ ದಳದ ಸರ್ವ ಸದಸ್ಯರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಕುಂಭಾಸಿ ಸೇವಾ ಸಂಗಮ ಶಾಲೆಯ ಮುಖ್ಯ ಶಿಕ್ಷಕ ಹರ್ಷ ಕೋಟೇಶ್ವರ ಮತ್ತು ಮಣೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರೂಪಾ ಜಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಾಯತ್ರಿ ಹತ್ವಾರ್ ಪ್ರಾರ್ಥಿಸಿದರು. ಕೊರವಡಿ ರೋಟರಿ ಸಮುದಾಯ ದಳದ ಸ್ಥಾಪಕಾಧ್ಯಕ್ಷ ರಾಮಚಂದ್ರ ಉಪಾಧ್ಯ ಸ್ವಾಗತಿಸಿದರು. ರಮೇಶ್ ಕಾಂಚನ್ ಮತ್ತು ಶೋಭಾ ಸನ್ಮಾನ ಪತ್ರ ವಾಚಿಸಿದರು. ಕಾವ್ಯ ಹರ್ಷ ಕನ್ನಡ ಗೀತೆಯನ್ನು ಹಾಡಿದರು. ಶ್ಯಾಮಲ ಭಟ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸಮುದಾಯ ದಳ ಕೊರವಡಿಯ ಕಾರ್ಯದರ್ಶಿ ಸುಪ್ರೀತಾ ಪ್ರಕಾಶ್ ವಂದಿಸಿದರು.





