ತೆಕ್ಕಟ್ಟೆ: ಮಕ್ಕಳು ಗುರು-ಹಿರಿಯರಿಗೆ ಗೌರವ ನೀಡುತ್ತಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿತು ಕನ್ನಡದ ಸೇವೆಯನ್ನು ಮಾಡುವಂತಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಶೆಟ್ಟಿ ಕನ್ನಡದ ಮಹತ್ವದ ಕುರಿತು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಉದಯಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕವಿಗಳ ಕಾವ್ಯಗಳನ್ನು ವಾಚಿಸುತ್ತಾ ಕನ್ನಡವೇ ನಮ್ಮ ಉಸಿರಾಗಬೇಕು. ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳಾಗಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಬೇಕು ಎಂದರು.
ವಿದ್ಯಾರ್ಥಿಗಳಾದ ಭವಿಷ್ ಮತ್ತು ತ್ರಿಶಾ ಅವರು ಕನ್ನಡ ನಾಡು-ನುಡಿಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ಗೀತೆಯನ್ನು ಹಾಡಿ ಸಂಭ್ರಮಿಸಿದರು. ಪೋಷಕರು, ಶಿಕ್ಷಕರಾದ ಪಿ.ವಿ.ಚಂದ್ರಶೇಖರ್, ಮನೋಹರ್, ಅನಿತಾ, ರತ್ನಾ, ಗೀತಾ, ದೀಪಾವತಿ, ವಸುಧಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಶಿಕ್ಷಕ ರಮೇಶ್ ಕುಲಾಲ್ ಎನ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಶ್ವಿತಾ ಆರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕ ರಾಜೇಂದ್ರ ಶೆಟ್ಟಿ ವಂದಿಸಿದರು.





