73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ | ಮಹಿಳಾ ಮೀನುಗಾರರ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮ

ಕೋಟೇಶ್ವರ: ಸಹಕಾರಿ ಸಂಘದ ಜನಕ ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ದಾರಿಯಲ್ಲಿಯೇ ಇಂದು ಬಹುತೇಕ ಸಹಕಾರಿ ಸಂಘಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಯಾವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಕಡಿಮೆಯಿಲ್ಲದಂತೆ ಸಹಕಾರಿ ಸಂಘಗಳು ಸಾಲ ಸೌಲಭ್ಯ ನೀಡುವ ಮೂಲಕ ಅಭಿವೃದ್ಧಿಗೊಂಡು, ಜನರಿಂದ ಜನರಿಗಾಗಿ ಜನರಿಗೋಸ್ಕರ ಸೇವೆ ನೀಡಿ ಬೆಳೆಯುತ್ತಿವೆ. ಮೀನುಗಾರರಿಗೆ ಸರ್ಕಾರ ನೀಡುವ ಸವಲತ್ತುಗಳು ಮತ್ತು ವಿಮಾ ಯೋಜನೆಗಳ ಮಾಹಿತಿಯನ್ನು ಇಲಾಖೆಯು ಸಂಘದ ಗ್ರಾಹಕರಿಗೆ ಮತ್ತು ಮೀನುಗಾರರಿಗೆ ಸಮರ್ಪಕವಾಗಿ ನೀಡಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿ. ಬೀಜಾಡಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಹಾಗೂ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಮಹಿಳಾ ಮೀನುಗಾರರ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಂಡು ಇಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘ ಮಾದರಿಯಾಗಿ ಸೇವೆ ನೀಡಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿಯೇ ಗುರುತಿಸುವ ಮೀನುಗಾರರ ಸೊಸೈಟಿ ಇದ್ದರೆ ಅದು ಬೀಜಾಡಿ ಮೀನುಗಾರರ ಸಹಕಾರಿ ಸಂಸ್ಥೆ ಎಂದರು.

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅವರು ಮಹಿಳಾ ಮೀನುಗಾರರ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಂಪನ್ಮೂಲ ವ್ಯಕ್ತಿ ಶ್ರೀಧರ್ ವಿ. ಎಸ್. ಅವರು ಮಹಿಳೆಯರು, ಯುವ ಜನರು ಮತ್ತು ಸಮಾಜದ ಅಂಚಿನ ವರ್ಗಗಳು ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಮೀನುಗಾರಿಕಾ ಇಲಾಖೆಯ ಸಂಕಷ್ಟ ಪರಿಹಾರ ವಿಮಾ ನಿಧಿ ವಿತರಣೆ, ಮಹಿಳಾ ಮೀನುಗಾರ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣೆ, ಮಹಿಳಾ ಮೀನುಗಾರರಿಗೆ ಮೀನು ಸಂರಕ್ಷಣೆಯ ಫ್ರೀಜರ್ ಕೊಡುಗೆ, ಮೀನುಗಾರರಿಗೆ ಲೈಫ್ ಜಾಕೆಟ್ ವಿತರಣೆ, ಶೈಕ್ಷಣಿಕ ಮತ್ತು ಸಹಾಯ ಹಸ್ತದ ನೆರವನ್ನು ವಿತರಿಸಲಾಯಿತು. ಸಹಕಾರ ರತ್ನ ಇಂದ್ರಾಳಿ ಜಯಕರ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯೆಯಿಲ್ಲದೇ ಕಡುಬಡತನದ ದಿನಗಳಲ್ಲಿ ಹಿರಿಯ ಮೀನುಗಾರರು ಸಂಕಷ್ಟದಲ್ಲಿ ಕಟ್ಟಿದ ನಮ್ಮ ಈ ಸಂಸ್ಥೆ ಪ್ರಸ್ತುತ ಸಾಲಿನಲ್ಲಿ 1.50 ಕೋಟಿ ಲಾಭಗಳಿಸುತ್ತಿದೆ. ಕರಾವಳಿ ಭಾಗದ ಜನರ ಸಂಕಷ್ಟಕ್ಕೆ ಮಿಡಿದು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಸಹಾಯ ಹಸ್ತವನ್ನು ಚಾಚಿ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ರಾಜೇಂದ್ರ ಕುಮಾರ್ ಮತ್ತು ಜಯಕರ ಶೆಟ್ಟಿ ಇಂದ್ರಾಳಿ ಇವರು ಸಹಕಾರಿ ರತ್ನಗಳು. ಇವರ ಮಾರ್ಗದರ್ಶನದಲ್ಲಿ ಇಂದು ನಾವು ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿದ್ದೇವೆ.

ಅಶೋಕ ಪೂಜಾರಿ ಬೀಜಾಡಿ, ಅಧ್ಯಕ್ಷರು, ಬೀಜಾಡಿ ಮೀನುಗಾರರ ಸಹಕಾರಿ ಸಂಘ

ದಿನೇಶ್ ಸುವರ್ಣ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.