ಭಾರತೀಯ ಸಂಸ್ಕ್ರತಿಯಲ್ಲಿ ತುಲಸೀ ಸಸ್ಯಕ್ಕೆ ವಿಷಯ ಪ್ರಾಶಸ್ತ್ಯ ಗೌರವ ನೀಡಲಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ ಕೂಡ ಆಗಿದೆ. ತುಲಸೀ ಸಸ್ಯದ ಜನನ ಕೂಡ ಬಹಳ ವಿಶಿಷ್ಟವಾಗಿದೆ. ಸಮುದ್ರಮಥನ ಕಾಲದಲ್ಲಿ ದೇವತೆಗಳು ಮತ್ತು ದಾನವರು ಕ್ಷೀರ ಸಮುದ್ರ ಮಥಿಸುವಾಗ ಕಾಮಧೇನು, ಕಲ್ಪವೃಕ್ಷದಂತಹ "ಹದಿನಾಲ್ಕು ರತ್ನಗಳು" ಹೊರಬಂದ ನಂತರ "ಅಮೃತ ಕಲಶ" ಬರುತ್ತದೆ.

ಶ್ರೀ ಮಹಾವಿಷ್ಣು ಈ ಅಮೃತ ಕಲಶ ವನ್ನು ತನ್ನಕೈಗೆತ್ತಿಕೊಂಡಾಗ ಆತನ ಕಣ್ಣುಗಳಿಂದ, "ಆನಂದಭಾಷ್ಪ" ಚಿಮ್ಮಿ ಅದರ ಹನಿ ಅಮೃತಕಲಶದೊಳಗೆ ಬಿತ್ತು. ಕ್ಷಣ ಮಾತ್ರದಲ್ಲಿ ಒಂದು ಚಿಕ್ಕ ಸಸ್ಯ ಹುಟ್ಟಿತು. ಈ ಸಸ್ಯಕ್ಕೆ ಹೋಲಿಕೆ ಅಥವಾ ತುಲನೆ ಮಾಡಲ ಸಾಧ್ಯವಾದ್ದರಿಂದ ಶ್ರೀ ಮಹಾವಿಷ್ಣು ಈ ಗಿಡಕ್ಕೆ "ತುಲಸೀ" ಎಂದು ಹೆಸರನ್ನಿಟ್ಟು ಕೃಪೆ ತೋರಿದ.

ಮುಂದೆ ಈ ತುಲಸೀಯನ್ನು ಮಹಾವಿಷ್ಣು ಲಕ್ಷ್ಮೀ ಜೊತೆ ವಿವಾಹವಾದ ಎಂಬ ಉಲ್ಲೇಖ ಸ್ಕಂದ ಪುರಾಣ ಹಾಗೂ ವಿಷ್ಣುಪುರಾಣದಲ್ಲಿದೆ. ಶ್ರೀ ಮಹಾವಿಷ್ಣು ತುಲಸೀ ಗೆ ಭೂಲೋಕದಲ್ಲಿ ಮನೆ ಮನೆಯಲ್ಲೂ ನೀನಿದ್ದು ನನ್ನ ಭಕ್ತರನ್ನು ಉದ್ಧರಿಸು ಎಂದು ಅನುಗ್ರಹಿಸುತ್ತಾನೆ.

ಅಂದಿನಿಂದ ಭೂಲೋಕದಲ್ಲಿ ಪ್ರತಿ ಮನೆಯಂಗಳದಲ್ಲಿ ಕಟ್ಟೆಯಲ್ಲಿ ತುಲಸೀ ಸನ್ನಿಹಿತಳಾದಳು. ಆ ಕಟ್ಟೆಯೇ "ತುಲಸೀ ಕಟ್ಟೆ"ಎಂದು ಪ್ರಸಿದ್ಧ ವಾಯಿತು. ಅದರಂತೆ ತುಲಸೀ ಇಲ್ಲದ ಒಂದೇ ಒಂದು ಮನೆ ಭೂಲೋಕದಲ್ಲಿ ನಮ್ಮ ಭಾರತೀಯರದ್ದು ಇರಲಾರದು ಎಂಬಂತೆ ಪ್ರತಿ ಮನೆ ಮನೆಗಳಲ್ಲೂ ತುಲಸೀ ಇರುವಂತಾಯಿತು.

ತುಲಸೀ ಇರದ ಮನೆ ಇರಲು ಸಾಧ್ಯವಿಲ್ಲ ಎಂಬಂತೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲೂ ತುಲಸಿಕಟ್ಟೆ ಇರುತ್ತದೆ. ತುಲಸೀ ಯನ್ನು ನಿತ್ಯ ಪೂಜಿಸಿ ಭಕ್ತರು ಅನುಗ್ರಹ ಪಡೆಯುತ್ತಾರೆ. ಶ್ರೀ ಮಹಾವಿಷ್ಣುವಿಗೆ ಆಷಾಢ ಶುದ್ಧ ಶಯನ ಏಕಾದಶೀಯಂದು "ಯೋಗನಿದ್ರೆ" ಕಾರ್ತಿಕ ಶುದ್ಧ ದ್ವಾದಶೀ ಶ್ರೀ ಮಹಾವಿಷ್ಣು ಏಳುತ್ತಾನೆ.

ಉತ್ಥಾನ ಎಂದರೆ ಏಳುವುದು ಎಂಬ ಅರ್ಥ. ಹಾಗಾಗಿ ಕಾರ್ತಿಕ ಮಾಸದ ಉತ್ಥಾನ ದ್ವಾದಶೀ ತುಲಸೀ ಪೂಜೆಗೆ ಎಲ್ಲಿಲ್ಲದ ಪ್ರಾಶಸ್ತ್ಯ. ಅಂತಹ ತುಲಸೀ ಗೆ ಈ ಉತ್ಥಾನ ದ್ವಾದಶೀ ಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ.

ಕಾರ್ತಿಕ ಮಾಸದ ಹನ್ನೆರಡನೇಯ ದಿನ ಉತ್ಥಾನ ದ್ವಾದಶೀ ಬರುತ್ತದೆ. ಕಾರ್ತಿಕ ಮಾಸವಿಡಿ ಶ್ರೀ ಮಹಾವಿಷ್ಣು "ದಾಮೋದರ"ನಾಗಿ ತುಲಸೀ ಕಟ್ಟೆಯಲ್ಲಿ ಇರುವುದು ವಿಶೇಷ.

ತುಲಸೀ ಕ್ಷೀರ ಸಮುದ್ರ ದಲ್ಲಿ ಜನಿಸಿದ ಕಾರಣ ತುಲಸೀಗೆ ಹಾಲಿನ ಅಭಿಷೇಕ ಮಾಡಿ ಪೂಜಿಸುವುದು ಬಹಳ ಶ್ರೇಷ್ಠ. ಈ ದಿನ ನೆಲ್ಲಿಗಿಡದ ಎಕ್ಕಲುಗಳನ್ನಿಟ್ಟು ಪೂಜಿಸುತ್ತಾರೆ. ನೆಲ್ಲಿಗಿಡ ಸಾಕ್ಷಾತ್ ಲಕ್ಷ್ಮೀ ಎಂಬ ನೆಲೆಯಲ್ಲಿ ಪೂಜೆ. ಶ್ರೀ ಮಹಾವಿಷ್ಣು ತುಲಸೀ ಜೊತೆ ಇರುವುದರಿಂದ ನೆಲ್ಲಿಗಿಡ(ಲಕ್ಷ್ಮೀ) ಈ ಪೂಜೆ ವಿಶೇಷ. ಪ್ರಾತಃಕಾಲದದಲ್ಲಿ ಹಾಲಿನ ಅಭಿಷೇಕ, ಪಾರಾಯಣ,ಪೂಜೆ, ಉದ್ದಿನ ದೋಸೆ ,ನೆಲ್ಲಿಕಾಯಿ ಚಟ್ನಿ ನೈವೇದ್ಯ ಮಾಡಿ,ವಿಶೇಷ ವಾಗಿ ಶ್ರೀವಿಷ್ಣುಸಹಸ್ರನಾಮ ಪಠಿಸಿ, ಆರತಿ ಮಾಡಿ ಪ್ರಾರ್ಥಿಸುವುದು.

ಸಂಜೆ ಸೂರ್ಯಸ್ತ ನಂತರ ತುಲಸೀ ಗೆ ದೀಪ ಬೆಳಗಿಸಿ ವಿಶೇಷ ಭಜನೆ ಹರಿಕೀರ್ತನೆ ಮಾಡಿ, ಪೂಜಿಸುವುದು.

ತುಲಸೀ ನೈವೇದ್ಯಕ್ಕೆ ಕ್ಷೀರ, ಅವಲಕ್ಕಿ, ಕುಸುಂಬರಿ, ಹಣ್ಣು ಕಾಯಿ ನೈವೇದ್ಯ ಮಾಡಿ, ಮಹಾಮಂಗಳಾರತಿ ಮಾಡಿ, ತುಲಸೀ ಜೊತೆ ಮಹಾವಿಷ್ಣುವಿಗೆ ವಿವಾಹ ಮಾಡಿಸುವ ಪದ್ಧತಿ ಇದೆ. ಇದನ್ನು"ತುಲಸೀ ಕಲ್ಯಾಣ" ಎಂದು ಭಕ್ತಿ ಶ್ರದ್ಧೆಯಿಂದ ಮಾಡುತ್ತಾರೆ.

ಇಂತಹ ಉತ್ಥಾನ ದ್ವಾದಶೀ ತುಲಸೀ ಪೂಜೆಯಿಂದ ಮಾನವನ ಏಳೇಳು ಜನುಮದ ಪಾಪಗಳು ನಾಶವಾಗಿ, ಅತಿಶಯವಾದ ಪುಣ್ಯ ಲಭಿಸಲಿದೆ. ಮಹಿಳೆಯರಿಗೆ ಧೀರ್ಘಸುಮಂಗಲಿ ಯೋಗ ಪ್ರಾಪ್ತವಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.