ಹಿಂದೂ ಸಂಘಟನೆಗಾಗಿ ಜೀವನ ಮುಡಿಪಾಗಿಟ್ಟ ದಿಟ್ಟ ಹೋರಾಟಗಾರ ಪ್ರದೀಪ್ ಸಂಗಮ್: ಶಾಸಕ ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರ: ಬ್ರಹ್ಮಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಂಗಮ್ ಫ್ರೆಂಡ್ಸ್ ಮತ್ತು ಸಮಸ್ತ ಹಿಂದೂ ಬಾಂಧವರ ನೇತೃತ್ವದಲ್ಲಿ ದಿ. ಪ್ರದೀಪ್ ಸಂಗಮ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಹಿಂದೂ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಿಟ್ಟ ಹೋರಾಟಗಾರರಾಗಿದ್ದ ದಿ. ಪ್ರದೀಪ್ ಸಂಗಮ್ ಅವರ ತ್ಯಾಗ, ಸಮರ್ಪಣೆ ಮತ್ತು ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಬಜರಂಗದಳದ ಜಿಲ್ಲಾ ಸಂಚಾಲಕ ಸುನೀಲ್ ಕೆ.ಆರ್. ಮಾತನಾಡಿ, ಪ್ರದೀಪ್ ಸಂಗಮ್ ಅವರ ಹೋರಾಟದ ಚೈತನ್ಯ ಯುವಕರಿಗೆ ಸದಾ ಸ್ಫೂರ್ತಿಯಾಗಲಿದೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಸುಬ್ರಮಣ್ಯ ಹೊಳ್ಳ ಅವರು ಮಾತನಾಡಿ, ಪ್ರದೀಪ್ ಸಂಗಮ್ ಅವರು ಹಿಂದೂ ಧರ್ಮ ಮತ್ತು ಸಂಘಟನೆಗಾಗಿ ತೋರಿದ ನಿಷ್ಠೆ, ಧೈರ್ಯ ಮತ್ತು ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಅವರ ಆದರ್ಶಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.
ಕಾರ್ಯಕ್ರಮದ ನಡುವೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿಡಿಯೋ ಕಾಲ್ ಮೂಲಕ ನುಡಿ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಅವರು ದಿ. ಪ್ರದೀಪ್ ಸಂಗಮ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ, ಹಿಂದೂ ಸಂಘಟನೆಗಾಗಿ ಅವರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅನೇಕ ಹಿಂದೂ ಸಂಘಟನೆಯ ಮುಖಂಡರು ಪ್ರದೀಪ್ ಸಂಗಮ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಹಿಂದೂ ಸಂಘಟನೆಗಾಗಿ ಜೀವನ ಮುಡಿಪಾಗಿಟ್ಟ ಅವರ ದಿಟ್ಟ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಕುಂದಾಪುರ ಬಿಜೆಪಿಯ ಅನೇಕ ಪ್ರಮುಖರು, ಹಿಂದೂ ಸಂಘಟನೆಯ ಕಾರ್ಯಕರ್ತರು, ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಹಿಂದೂ ಸಂಘಟನೆಯ ಮುಖಂಡರಾದ ಶಂಕರ್ ಅಂಕದಕಟ್ಟೆ ನಿರೂಪಿಸಿದರು. ಸುರೇಂದ್ರ ಮಾರ್ಕೋಡ್ ವಂದಿಸಿದರು.





