ಕೋಟೇಶ್ವರ: ಬಾಲ್ಯದಲ್ಲಿ ಕಳೆದ ಬಂಗಾರದ ದಿನಗಳಿಂದ ಇಂದು ವಜ್ರದಂತೆ ಸಮಾಜದಲ್ಲಿ ನೇರಂಬಳ್ಳಿ ಮೋಹನ ಆಚಾರ್ಯ ಸೇರಿದಂತೆ ಎನ್.ಆರ್. ಆಚಾರ್ಯ ಕುಟುಂಬ ಬದುಕನ್ನು ನಡೆಸಿ ಬೆಳೆಯುತ್ತಿದೆ. ಆಚಾರ್ಯರು ತಮ್ಮ ಹಿರಿಯರ ಮಾರ್ಗದರ್ಶನದಿಂದ ಸರಳ ಸಜ್ಜನಿಕೆಯ ಬದುಕಿನ ಜೊತೆಗೆ ಪ್ರಾಚೀನ ಪರಂಪರೆ, ಸಂಸ್ಕಾರ, ಸಂಸ್ಕೃತಿಯ ಬದುಕನ್ನು ಕಲಿತು ಇಂದು ಸಹೋದರಿಯ ಪ್ರೇರಣೆಯಿಂದ ಕೃತಿಯ ರೂಪದಲ್ಲಿ ಸಮಾಜಕ್ಕೆ 'ಬಾಲ್ಯದ ಆ ಬಂಗಾರದ ದಿನಗಳು' ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ಪರ್ಯಾಯ ಅರ್ಚಕ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಘಟಕ ಮತ್ತು ನೇರಂಬಳ್ಳಿ ಮೋಹನ ಆಚಾರ್ಯ ಇವರು ಸಂಯುಕ್ತವಾಗಿ ಕೋಟೇಶ್ವರದ ರಥಬೀದಿಯ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೇರಂಬಳ್ಳಿ ಮೋಹನ ಆಚಾರ್ಯ ಅವರ ಚೊಚ್ಚಲ ಕೃತಿ 'ಬಾಲ್ಯದ ಆ ಬಂಗಾರದ ದಿನಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಂದಗದ್ದೆ ಗಣೇಶ್ ಸಾಗರ ಅವರು ಪುಸ್ತಕ ಪರಿಚಯ ಮಾಡಿ ಶುಭ ಹಾರೈಸಿದರು. ಎನ್.ಆರ್. ಆಚಾರ್ಯ ಆಸ್ಪತ್ರೆ ಕೋಟೇಶ್ವರದ ವೈದ್ಯಕೀಯ ನಿರ್ದೇಶಕ ಡಾ. ಭಾಸ್ಕರ್ ಆಚಾರ್ಯ ಮುನ್ನುಡಿ ಮಾತುಗಳನ್ನಾಡಿದರು. ಸಾಹಿತಿ ವಂದಗದ್ದೆ ಚಂದ್ರಮೌಳಿ ಸಾಗರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕುಂದಪ್ರಭ ಸಂಪಾದಕ ಯು.ಎಸ್. ಶೆಣೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೇರಂಬಳ್ಳಿ ಮೋಹನ ಆಚಾರ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸಬಿತಾ ಆಚಾರ್ಯ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮೇದಿನಿ ಶೆಟ್ಟಿ ಪ್ರಾರ್ಥಿಸಿದರು. ಗುರು ಇಂಜಿನಿಯರ್ ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರ್ವಹಿಸಿದರು. ಬಾಬಣ್ಣ ಪೂಜಾರಿ ವಂದಿಸಿದರು.